18ನೇ ವಯಸ್ಸಿನಲ್ಲಿ ಶಿರಸಿ ತಾಲೂಕಿನ ನಡಗೋಡದ ಶಂಭು ಭಟ್ಟ ಮತ್ತು ರುಕ್ಮಿಣಿ ಭಟ್ಟರ ಮಗಳಾದ ನಿರ್ಮಲಾ ಹೆಗಡೆ ಅವರು 1992ರಲ್ಲಿ ಗೋಳಿಕೊಪ್ಪದ ಮಂಜುನಾಥ ಹೆಗಡೆ ಅವರ ಮನೆಗೆ ವಧುವಾಗಿ ಸೇರಿದರು. ಪಕ್ಕಾ ಗೃಹಿಣಿಯಾಗಿ ಅವರು ಮಗಳು ಪೂಜಾ ಹತ್ತನೇ ತರಗತಿಯವರೆಗೆ ತೋಟ, ಗದ್ದೆ, ಅಡಿಗೆ ಮತ್ತು ಅಡಿಕೆ ಸುಲಿಯುವಂತಹ ದಿನನಿತ್ಯದ ಗೃಹಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.
ಮಗಳ ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದ ನಿರ್ಮಲಾ ಹೆಗಡೆಯವರ ಪ್ರೋತ್ಸಾಹದಿಂದ ಪೂಜಾ ಅವರು ಭರತನಾಟ್ಯ ಪ್ರಾವೀಣ್ಯ (ವಿದ್ಯಾವಿದ್ವತ್) ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಯಾಂಕ ಪಡೆದು ಉತ್ತೀರ್ಣರಾದರು. ಇದೇ ಸಮಯದಲ್ಲಿ ತಾಯಿ–ಮಗಳು ಇಬ್ಬರೂ ಓದಿದ ಭೈರುಂಬೆ ಹೈ ಸ್ಕೂಲ್ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿತ್ತು (2009–10).
ಈ ಸಂದರ್ಭದಲ್ಲೇ ಹಳೆಯ ವಿದ್ಯಾರ್ಥಿಗಳಿಂದ ಹೊಸ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಉತ್ಸಾಹ ಮೂಡಿತ್ತು. ಆಗ ಗಡಿಗೆಹೊಳೆ ಗ್ರಾಮದ ವಿದ್ವಾನ್ ಶ್ರೀ ಸುಬ್ರಾಯ ಭಟ್ಟ (ಸಂಸ್ಕೃತ ಅಧ್ಯಾಪಕ ಹಾಗೂ ತಾಳಮದ್ದಳೆ ಅರ್ಥಧಾರಿಗಳು) ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಶ್ಯಪ ಪ್ರತಿಷ್ಠಾನ ಗಡಿಗೆಹೊಳೆ ಯಕ್ಷಗಾನ ಸಂಸ್ಥೆಯಲ್ಲಿ ನಿರ್ಮಲಾ ಹೆಗಡೆ ಸದಸ್ಯೆಯಾದರು.
ಆ ಊರಿನ ಐದು–ಆರು ಮಹಿಳೆಯರು ತಾಳಮದ್ದಳೆ ಮತ್ತು ಯಕ್ಷಗಾನ ಕಲಿಯುತ್ತಿದ್ದರು. ಅವರಲ್ಲಿ ತಮ್ಮ ಸಹೋದರಿ ವಸುಮತಿ (ಚಿಕ್ಕಪ್ಪನ ಮಗಳು) ನಿರ್ಮಲಾ ಅವರಿಗೆ “ನೀನು ಸಹ ಸೇರಿ ಕಲಿಯು” ಎಂದು ಆಹ್ವಾನಿಸಿದರು. ಆದರೆ ಗೋಳಿಕೊಪ್ಪದಿಂದ ಗಡಿಗೆಹೊಳೆ 9 ಕಿ.ಮೀ. ದೂರವಿದ್ದರಿಂದ ಅವರು ಮೊದಲ ವರ್ಷ ಹಿಂಜರಿದರು.
ಆದರೆ ಮುಂದಿನ ವರ್ಷ (2007) ಅವರು ತಾಳಮದ್ದಳೆ ಕಲಿಯಲು ಸೇರ್ಪಡೆಗೊಂಡರು. ಅವರ ಪತಿ ಎಂ.ಕೆ. ಹೆಗಡೆ ಗೋಳಿಕೊಪ್ಪ ಅವರ ಪ್ರೋತ್ಸಾಹ ಮತ್ತು ಸಹಕಾರ ಅತ್ಯಂತ ಮಹತ್ವದ ಪಾತ್ರ ವಹಿಸಿತು. ಪ್ರಯಾಣದ ಕಷ್ಟಗಳ ನಡುವೆಯೂ ತರಬೇತಿ ನಿರಂತರವಾಗಿ ನಡೆಯಿತು.
ಎರಡು ವಾರಗಳ ನಂತರ ಯಕ್ಷಗಾನ ನೃತ್ಯ ಕಲಿಸಲು ಬಂದ ಗುರು ಗಣಪತಿ ಭಾಗವತ ಕವಾಳೆ (ಪ್ರಸಿದ್ಧ ಮದ್ದಲೆಗಾರರು) ಅವರು ಮದ್ದಲೆ ಇಳಿಸಿ, ಹಾಡು ಹೇಳುತ್ತಾ, ಕುಣಿದು ಕಲಿಸುತ್ತಿದ್ದ ಸಂದರ್ಭ ನಿರ್ಮಲಾ ಹೆಗಡೆ ಅವರ ಮನಸ್ಸು ಸಂಪೂರ್ಣವಾಗಿ ಯಕ್ಷಗಾನಕ್ಕೆ ತೊಡಗಿತು. ಆಗ ಅವರ ವಯಸ್ಸು ಕೇವಲ 32 ವರ್ಷ.
ಆ ದಿನದಿಂದ ಆರಂಭವಾದ ಯಕ್ಷಗಾನ ಮತ್ತು ತಾಳಮದ್ದಳೆ ಪಯಣ ಇಂದಿಗೂ ನಿರಂತರವಾಗಿ ಸಾಗುತ್ತಿದೆ.
2017ರ ವೇಳೆಗೆ ಅವರು ಶಕುಂತಳೆ ಪಾತ್ರವನ್ನು ಅಭಿನಯಿಸುವ ಮಟ್ಟದಿಂದ ಪ್ರಸಂಗ ಬರೆಯುವ ಮಟ್ಟಕ್ಕೆ ತಲುಪಿದರು. ಅದಕ್ಕೆ ಪ್ರೇರಣೆ ನೀಡಿದವರು ದಿವಂಗತ ಶ್ರೀ ರಾಮ ಹೆಗಡೆ ಕೆರೆಮನೆ (ಡಾ. ಮಹಾಬಲ ಹೆಗಡೆಯವರ ಪುತ್ರ). ಅವರು ದಿನಕ್ಕೆ ಒಂದು ಪದ್ಯ ಬರೆದು ಕಳುಹಿಸುವಂತೆ ಪ್ರೋತ್ಸಾಹಿಸಿ, ತಿದ್ದುಪಡಿ ಮಾಡಿ ಮಾರ್ಗದರ್ಶನ ನೀಡುತ್ತಿದ್ದರು. ಹೀಗೆ 70 ಪದ್ಯಗಳ ಪ್ರಸಂಗ ಸಿದ್ಧವಾಯಿತು.
ಆ ಪ್ರಸಂಗವನ್ನು ವೇದಿಕೆಯಲ್ಲಿ ಪ್ರದರ್ಶಿಸಬೇಕೆಂಬ ಆಸೆಯಿಂದ ನಿರ್ಮಲಾ ಹೆಗಡೆ ಅವರು ತಮ್ಮ ಸಹೋದರ ಮತ್ತು ಭಾಗವತರಾದ ಶ್ರೀ ಗಜಾನನ ಭಟ್ಟ ತುಳಗೇರಿ ಅವರೊಂದಿಗೆ ಚರ್ಚಿಸಿದಾಗ ಅವರು ಅಗತ್ಯ ಮಾರ್ಗದರ್ಶನ ನೀಡಿದರು.
ಅದೇ ಸಂದರ್ಭದಲ್ಲಿ ಹುಟ್ಟಿದ ಮಾತು —
“ಯಕ್ಷಗೆಜ್ಜೆ (ರಿ)” ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.
ಯಕ್ಷಗೆಜ್ಜೆ (ರಿ) ಸಂಸ್ಥೆ 7 ಜನ ಸದಸ್ಯರ ನೇಮಕಾತಿಯ ಮೂಲಕ ಅಧಿಕೃತವಾಗಿ ರಿಜಿಸ್ಟರ್‌ಗೊಂಡಿತು.
ಯಕ್ಷಗೆಜ್ಜೆ (ರಿ) ಇದು ಶಿರಸಿಯ ಹೃದಯಭಾಗದಲ್ಲಿ ಸ್ಥಾಪಿತವಾದ, ಮಹಿಳೆಯರು ಮತ್ತು ಮಕ್ಕಳಿಗೆ ಸಮರ್ಪಿತವಾದ ಯಕ್ಷಗಾನ ತರಬೇತಿ ಕೇಂದ್ರವಾಗಿದೆ. 2017ರಲ್ಲಿ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ ಗೋಳಿಕೊಪ್ಪ ಅವರ ನೇತೃತ್ವದಲ್ಲಿ ಆರಂಭಗೊಂಡ ಈ ಸಂಸ್ಥೆ, ಯಕ್ಷಗಾನದ ಪಾವನ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ.
© YAKSHA GEJJE. 2017-2025. All Rights Reserved